ಮನಸ್ಸಿನ ಕಲ್ಮಶ ಹೋಗಲಾಡಿಸಲು ದೀಪೋತ್ಸವ - ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ.
ಮಧುಗಿರಿ - ಮನಸ್ಸಿನಲ್ಲಿರುವ ಕಲ್ಮಶಗಳನ್ನು ಹೋಗಲಾಡಿಸಲು ದೀಪೋತ್ಸವ ಆಚರಿಸಲಾಗುತ್ತದೆ'' ಎಂದು ಸಿದ್ದರಬೆಟ್ಟ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.
ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಪ್ರಸನ್ನ ಪಾರ್ವತಿ ಸಮೇತ ಮಲ್ಲೇಶ್ವರ ಸ್ವಾಮಿ ದೇವಸ್ಥಾನ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯಗಳ ಮಧ್ಯಭಾಗದಲ್ಲಿ ಕಾರ್ತಿಕ ಮಾಸದ ಮೂರನೇ ಸೋಮವಾರದ ಅಂಗವಾಗಿ ಮಧುಗಿರಿ ಸಮಸ್ತ ಭಕ್ತಾದಿಗಳ ಸಹಕಾರದೊಂದಿಗೆ ಏರ್ಪಡಿಸಿದ್ದ ''ಕಾರ್ತಿಕ ದೀಪೋತ್ಸವ'' ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಕಾರ್ತಿಕ ಮಾಸದ ಪ್ರತಿದಿನ ಮನೆಗಳಲ್ಲಿ ದೀಪೋತ್ಸವವನ್ನು ಆಚರಿಸುತ್ತೇವೆ. ಆದರೆ ಸಾಮೂಹಿಕವಾಗಿ ಆಚರಿಸುವ ದೀಪೋತ್ಸವವನ್ನು "ಕಾರ್ತಿಕ ಲಕ್ಷ ದೀಪೋತ್ಸವ'' ಎಂದು ಕರೆಯಲಾಗುತ್ತದೆ ಎಂದರು.
ನಾವುಗಳು ಒಂದು ವಾರ ಪ್ರವಾಸ ಕೈಗೊಂಡು ಮನೆಗೆ ಯಾವುದೇ ಹೊರಗಡೆಯ ಕಸ ಬರದ ರೀತಿ ಎಲ್ಲಾ ಕಿಟಕಿ -ಬಾಗಿಲುಗಳನ್ನು ಭದ್ರ ಮಾಡಿ ಹೋಗಿದ್ದರು ಕೂಡ ಪ್ರವಾಸ ಮುಗಿಸಿ ಬಂದ ನಂತರ ಮನೆ ಧೂಳು ತುಂಬಿರುತ್ತದೆ. ಅದೇ ರೀತಿ ನಮಗೆ ಅರಿವಿಲ್ಲದೆ ಮನಸ್ಸಿನಲ್ಲಿ ಕಣ್ಣಿಗೆ ಕಾಣದ ರೀತಿ ಕೆಟ್ಟ ಆಲೋಚನೆಗಳು ತುಂಬುತ್ತದೆ .ಅದನ್ನು ಹೋಗಲಾಡಿಸುವ ಸಲುವಾಗಿ ಈ ದೀಪೋತ್ಸವಗಳಲ್ಲಿ ಪಾಲ್ಗೊಂಡರೆ ಭಗವಂತನ ಕೃಪೆ ದೊರೆಯುತ್ತದೆ ಎಂದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ಮಾತನಾಡಿ, ಮಧುಗಿರಿ ಇತಿಹಾಸದಲ್ಲೇ ಪ್ರಥಮ ಬಾರಿಗೆ ದೇವಾಲಯದ ಮುಂಭಾಗ ದೀಪೋತ್ಸವ ಕಾರ್ಯಕ್ರಮ ಏರ್ಪಡಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ತಹಶಿಲ್ದಾರ್ ಶಿರೀನ್ ತಾಜ್ ಮಾತನಾಡಿ, ದೀಪೋತ್ಸವವನ್ನು ಈ ಬಾರಿ ಅದ್ದೂರಿಯಾಗಿ ನಡೆಸುವ ಮೂಲಕ ಮಧುಗಿರಿ ತಾಲೂಕಿನಲ್ಲಿ ಶಾಂತಿ ನೆಮ್ಮದಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಪುರಸಭೆ ಅಧ್ಯಕ್ಷ ಲಾಲಾಪೇಟೆ ಮಂಜುನಾಥ ಮಾತನಾಡಿ, ಈ ಬಾರಿ ಮಧುಗಿರಿಯ ಸರ್ವ ಭಕ್ತರ ಸಹಕಾರದೊಂದಿಗೆ ಈ ದೀಪೋತ್ಸವ ವನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದೀಪಗಳನ್ನು ಅಳವಡಿಸಿ ಕಾರ್ತಿಕ ಮಾಸದ ದೀಪೋತ್ಸವ ಚೆನ್ನಾಗಿ ಮಾಡೋಣ ಎಂದರು. 
ದೀಪೋತ್ಸವ ಪ್ರಾರಂಭಕೂ ಮುನ್ನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಅಗ್ನಿಹೋತ್ರ ಹೋಮ, ಲಲಿತ ಸಹಸ್ರನಾಮ ಪಾರಾಯಣ ಹಾಗೂ ಸಂಕಲ್ಪವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಹನುಮಂತರಾಯಪ್ಪ, ಪುರಸಭೆ ಉಪಾಧ್ಯಕ್ಷೆ ಸುಜಾತ ಶಂಕರ್ ನಾರಾಯಣ್, ಸದಸ್ಯರಾದ ಎಂ.ಶ್ರೀಧರ್, ಗೋವಿಂದರಾಜು, ಆಡಿಟರ್ ಲಕ್ಷ್ಮಿ ಪ್ರಸಾದ್, ಪುರಸಭಾ ಮಾಜಿ ಅಧ್ಯಕ್ಷರುಗಳಾದ ಎಂ.ಕೆ.ನಂಜುಂಡಯ್ಯ, ಎನ್.ಗಂಗಣ್ಣ ,ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ಶಂಕರ ಸೇವಾ ಸಮಿತಿಯ ಅಧ್ಯಕ್ಷ ಬಿ.ಆರ್.ಸತ್ಯನಾರಾಯಣ, ಭಕ್ತ ಮಂಡಳಿಯ ಜಿ.ಆರ್.ಧನಪಾಲ್, ಕೆ.ಎಸ್.ಪಾಂಡುರಂಗರೆಡ್ಡಿ, ಮೂಡ್ಲಗೀರಿಶ್, ದೊಲಿಬಾಬು, ಜಿ.ನಾರಾಯಣರಾಜು, ಪ್ರಧಾನ ಅರ್ಚಕರುಗಳಾದ ನಟರಾಜ್ ದೀಕ್ಷಿತ್, ಅನಂತ ಪದ್ಮನಾಭ ಭಟ್ಟರು ಹಾಗೂ ಅಪಾರಭಕ್ತರು ಪಾಲ್ಗೊಂಡಿದ್ದರು.